ಮಲೆನಾಡು • ಸ್ಥಳೀಯ ಸುದ್ದಿ • ಕನ್ನಡದ ಧ್ವನಿ ಪ್ರತಿಬಿಂಬ
ನಮ್ಮ ಊರಿನ ಸುದ್ದಿ — ನಮ್ಮ ಧ್ವನಿ
ತಾಜಾ ಸುದ್ದಿ
ಪ್ರತಿಬಿಂಬಕ್ಕೆ ಸ್ವಾಗತ • ಸ್ಥಳೀಯ ಮತ್ತು ಮಲೆನಾಡಿನ ಸುದ್ದಿಗಳನ್ನು ವೇಗವಾಗಿ ಓದಿ

ಬರಪೀಡಿತ ತಾಲೂಕು ರೈತರ ಸಾಲ ಮರುಪಾವತಿ ಅವಧಿ ವಿಸ್ತರಣೆ : ಕೃಷಿಪತ್ತಿನ ಸಹಕಾರ ಸಂಘದ ಸಾಲದ ಕಥೆ ಏನು?

Extension of Loan Repayment Period for Farmers in Drought-Affected Taluks: What About Loans from Agricultural Credit Cooperative Societies?


ರಾಜ್ಯ ಸರ್ಕಾರವು ಈಗಾಗಲೇ ಅಧಿಕೃತ ಪ್ರಕಟಣೆ ಮತ್ತು ರಾಜ್ಯ ಮಟ್ಟದ ಬ್ಯಾಂಕರ್‌ ಸಭೆಯಲ್ಲಿ ಚರ್ಚಿಸಿ ಬರಪೀಡಿತ ತಾಲೂಕುಗಳ ರೈತರ ಸಾಲವನ್ನು ಕಡ್ಡಾಯ ವಸೂತಿಯಲ್ಲಿ ಪರಿಗಣಿಸಬಾರದು. ಬರ ಸ್ಥಿತಿಯ ಅನುಸಾರ ಹೆಚ್ಚಿನ ಕಾಲಾವಕಾಶನೀಡಬೇಕು. ಆರಂಭಿಕ ಮರುಪಾವತಿ ತಡೆ 1 ವರ್ಷ ಮತ್ತು ಇವುಗಳಲ್ಲಿ KCC, ಬೆಳೆಸಾಲ, ಕೃಷಿಸಾಲ ಮತ್ತು ಹೈನುಗಾರಿಕೆ, ರೇಷ್ಮೆ, ಮೀನುಗಾರಿಕೆ ಮುಂತಾದ ಕೃಷಿ ಸಂಬಂಧಿತ ಸಾಲಗಳು ಒಳಗೊಂಡಿವೆ. ಯಾವುದೇ ಕಾರಣಕ್ಕೂ ಕಡ್ಡಾಯ ವಸೂಲಿಯಾಗಿ ಪರಿಗಣಿಸಬಾರದೆಂದು ಬ್ಯಾಂಕುಗಳಿಗೆ ಸೂಚಿಸಿವೆ.

 ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ 2026ರ ಸೆಪ್ಟೆಂಬರ್ 10ರ 177ನೇ ವಿಶೇಷ SLBC ಸಭೆಯ ನಡಾವಳಿಯಲ್ಲೂ ಇದನ್ನು ಪ್ರಕಟಿಸಿದೆ. ಆದರೆ ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಸಾಲವನ್ನು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘಗಳಲ್ಲಿ ಪಡೆದಿದ್ದು ಈ ಸಾಲದ ಬಗ್ಗೆ ಸರ್ಕಾರ ಯಾವುದೇ ಪ್ರತ್ಯೇಕ ಸ್ಪಷ್ಟೀಕರಣ ನೀಡಿಲ್ಲ. 

ಸೆ.17ರಂದು ನಡೆದ ಬ್ಯಾಂಕರ್‌ ಸಭೆಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿಯವರು ನಬಾರ್ಡ್‌ ಮತ್ತು ಸರ್ಕಾರದೊಂದಿಗೆ ಇನ್ನೊಂದು ಸುತ್ತಿನ ಚರ್ಚೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮತ್ತು ಬರ ಘೋಷಣೆಯಾದ 45ದಿನಗಳ ಒಳಗಾಗಿ ಬರ ಪರಿಹಾರದ ಪ್ಯಾಕೇಜ್‌ ಜಾರಿಗೊಳಿಸಲು ಕೋರಿದ್ದಾರೆ. ಜ.9ರೊಳಗೆ ಅದನ್ನು ಪೂರ್ಣಗೊಳಿಸಲೂ ತಿಳಿಸಿದ್ದಾರೆ.

 ಆದರೆ ಅಪೆಕ್ಸ್‌ ಬ್ಯಾಂಕುಕೂಡಾ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಒಳಗೆ ಒಳಗೊಂಡಿದ್ದು ಅದರನ್ವಯ ಯಾವುದೇ ಪ್ರತ್ಯೇಕ ಸುತ್ತೋಲೆಗಳಿನ್ನೂ ಪ್ರಾಥಮಿಕ ಸಹಕಾರ ಸಂಘಗಳನ್ನು ತಲುಪಿಲ್ಲ. ಸಹಕಾರ ಇಲಾಖೆಯ ಅಧಿಕೃತ ಮಾಹಿತಿಯೂ ಹೊರಬಿದ್ದಿಲ್ಲ. ಹೀಗಿರುವಾತ ರೈತರ ಬೆಳೆಸಾಲದ ಮರುಪಾವತಿ ಅವಧಿ ಮುಂಡೂಡಿಕೆ ಗೊಂದಲದಲ್ಲೇ ಇದೆ. ಕಡ್ಡಾಯ ವಸೂಲಿಯಲ್ಲಿ ಪರಿಗಣಿಸಬಾರದೆಂಬ ಆದೇಶವೂ ಇದೆ. ಇಷ್ಟೆಲ್ಲಾ ಇದ್ದರೂ ಅಧಿಕೃತ ಸ್ಪಷ್ಟನೆ, ಸುತ್ತೋಲೆ ಹೊರಡಿಸದೇ ಕೊನೆ ಕ್ಷಣದಲ್ಲಿ ರೈತರನ್ನು ಹೈರಾಣಾಗಿಸುವ ಬದಲು ಸರ್ಕಾರ ಈ ಕುರಿತ ಅಧಿಕೃತ ಮಾಹಿತಿ ಹೊರಡಿಸಬೇಕಿದೆ ಎಂಬುದು ಅನೇಕ ರೈತರ ಒತ್ತಾಯವಾಗಿದೆ.



As an Amazon Associate I earn from qualifying purchases.

https://link.amazon/B02oO1hGc

ರೋಟರಿ ಸಂಸ್ಥೆಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

 

ರೋಟರಿ ಸಂಸ್ಥೆಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ

ತೀರ್ಥಹಳ್ಳಿ: ರಸ್ತೆ ಸುರಕ್ಷತೆಯು ಸಾರ್ವಜನಿಕ ಜೀವ ರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ವಾಹನ ಸವಾರರು ಹಾಗೂ ಚಾಲಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ರೋ. ಬಿ. ಎಂ. ಭಟ್ ಕರೆ ನೀಡಿದರು. ರೋಟರಿ ಕ್ಲಬ್ ತೀರ್ಥಹಳ್ಳಿ ವತಿಯಿಂದ ತುಂಗಾ ನದಿಯ ಹೊಸ ಸೇತುವೆಯ ಪಕ್ಕದಲ್ಲಿ ನಿರ್ಮಿಸಲಾದ 'ರಸ್ತೆ ಸುರಕ್ಷತೆಯ ನಿಯಮಗಳ ಸೂಚನಾ ಫಲಕ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುಣಮಟ್ಟದ ಹೆಲ್ಮೆಟ್ ಧರಿಸುವುದು ಕಡ್ಡಾಯ:

ಮಾತನ್ನು ಮುಂದುವರಿಸಿದ ಬಿ. ಎಂ. ಭಟ್ ಅವರು, "ದ್ವಿಚಕ್ರ ವಾಹನ ಸವಾರರು ಹಾಗೂ ಅವರ ಹಿಂಬದಿ ಕುಳಿತು ಪ್ರಯಾಣಿಸುವ ಸವಾರರು ಕಡ್ಡಾಯವಾಗಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಪ್ರತಿಯೊಂದು ರಸ್ತೆಯಲ್ಲೂ ನಿಗದಿಪಡಿಸಿರುವ ವೇಗಮಿತಿಯನ್ನೇ ಪಾಲಿಸಬೇಕು ಹಾಗೂ ಯಾವುದೇ ಕಾರಣಕ್ಕೂ ಅತಿವೇಗವಾಗಿ ವಾಹನ ಚಲಾಯಿಸಬಾರದು" ಎಂದು ಕಿವಿಮಾತು ಹೇಳಿದರು.

"ಮದ್ಯ ಅಥವಾ ಯಾವುದೇ ರೀತಿಯ ಅಮಲು ಪದಾರ್ಥ ಸೇವಿಸಿ ವಾಹನ ಚಲಾಯಿಸುವುದು ಕಾನೂನಿನ ಪ್ರಕಾರ ಗಂಭೀರ ಅಪರಾಧವಾಗಿದೆ. ಜೊತೆಗೆ ವಾಹನ ಚಲಾಯಿಸುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದು ಅಥವಾ ಸಂದೇಶ ರವಾನಿಸುವುದು ಅಪಘಾತಗಳಿಗೆ ಆಹ್ವಾನ ನೀಡಿದಂತೆ. ಇಂತಹ ನಿರ್ಲಕ್ಷ್ಯತನದಿಂದ ಚಾಲಕರು ದೂರವಿರಬೇಕು" ಎಂದು ಅವರು ಎಚ್ಚರಿಸಿದರು.

ರೋಟರಿ ಸಂಸ್ಥೆಯ ಕಾರ್ಯಕ್ಕೆ ಪೊಲೀಸ್ ಇಲಾಖೆ ಶ್ಲಾಘನೆ:

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪೊಲೀಸ್ ಸಬ್ ಇನ್ಸ್ಪಕ್ಟರ್ ಶ್ರೀಮತಿ ಸುಷ್ಮಾ ಅವರು ಮಾತನಾಡಿ, "ಸಂಚಾರಿ ನಿಯಮಗಳು ಹಾಗೂ ರಸ್ತೆ ಸುರಕ್ಷತೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವ ರೋಟರಿ ಕ್ಲಬ್ ತೀರ್ಥಹಳ್ಳಿಯ ಈ ಕಾರ್ಯ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸರಳ ಉದ್ಘಾಟನಾ ಸಮಾರಂಭದಲ್ಲಿ ರೋಟರಿ ಕ್ಲಬ್ ತೀರ್ಥಹಳ್ಳಿಯ ಅಧ್ಯಕ್ಷರಾದ ರೋ. ಎನ್. ಹೆಚ್. ರಮೇಶ್, ವಲಯ 11ರ ಸಹಾಯಕ ಗವರ್ನರ್ ರೋ. ಎಸ್. ನಾಗರಾಜ್, ಜೋನಲ್ ಲೆಫ್ಟಿನೆಂಟ್ ರೋ. ವಿಷ್ಣುಮೂರ್ತಿ ಹಾಗೂ ರೋಟರಿ ಸಂಸ್ಥೆಯ ಪ್ರಮುಖ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸ್ಥಳೀಯ ಸಂಸ್ಥೆ ಚುನಾವಣೆ ಸಧ್ಯಕ್ಕುಂಟೇ ? ಸರ್ಕಾರದ ನಡೆ ಏನು?


ಸ್ಥಳೀಯ ಸಂಸ್ಥೆ ಚುನಾವಣೆ ಸಧ್ಯಕ್ಕುಂಟೇ ? ಸರ್ಕಾರದ ನಡೆ ಏನು? Are local body elections likely anytime soon? What is the government's stance?
ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಪಂಚಾಯತ್ ರಾಜ್ ಸಂಸ್ಥೆಗಳಿಗೆ (ತಾ.ಪಂ, ಜಿ.ಪಂ. ಮತ್ತು ಗ್ರಾ.ಪಂ.) ಚುನಾವಣೆಗಳು ಎಷ್ಟರಮಟ್ಟಿಗೆ ಹತ್ತಿರದಲ್ಲಿವೆ ಎಂಬುದು ಇಂದು ಲಕ್ಷಾಂತರ ಗ್ರಾಮೀಣ ಜನತೆ ಹಾಗೂ ರಾಜಕೀಯ ಆಕಾಂಕ್ಷಿಗಳಲ್ಲಿ ಮೂಡಿರುವ ದೊಡ್ಡ ಪ್ರಶ್ನೆಯೇ ಆಗಿ ಉಳಿದಿದೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಆಡಳಿತಾವಧಿ ಮುಗಿದು ಹಲವು ವರ್ಷಗಳೇ ಕಳೆದಿವೆ. ಕಳೆದೆರಡು ವಾರಗಳ ಹಿಂದಷ್ಟೇ ಸರ್ಕಾರವು  ತಾ.ಪಂ ಮತ್ತು ಜಿ.ಪಂ.ಗಳ ಕ್ಷೇತ್ರವಾರು ಹಾಗೂ ವರ್ಗವಾರು ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಪ್ರಕಟಿಸಿದೆ.

 ಮೀಸಲಾತಿ ಪಟ್ಟಿ ಹೊರಬಿದ್ದಿರುವುದರಿಂದ ಮತ್ತು ಮತ ಪೆಟ್ಟಿಗೆಗಳ  ಖರೀದಿಗೆ ಸರ್ಕಾರ ಅನುದಾನ ಒದಗಿಸಿರುವುದರಿಂದ, ರಾಜ್ಯ ಚುನಾವಣಾ ಆಯೋಗಕ್ಕೆ ಚುನಾವಣಾ ವೇಳಾಪಟ್ಟಿ  ಪ್ರಕಟಿಸಲು ಇದ್ದ ತಾಂತ್ರಿಕ ಅಡೆತಡೆಗಳು ಬಹುತೇಕ ದೂರವಾಗಿವೆ. ಇದು ಡಿಸೆಂಬರ್ ಅಂತ್ಯ ಅಥವಾ ಜನವರಿ ವೇಳೆಗೆ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ನಡೆಯುವ ಸಾಧ್ಯತೆ ಇದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಅಧಿಕೃತವಾಗಿ ಯಾವುದೇ ಆದೇಶ ಹೊರಬಿದ್ದಿಲ್ಲ.

ಗ್ರಾಮ ಪಂಚಾಯಿತಿ  ಪ್ರಸ್ತಾ ಸಧ್ಯಕ್ಕಿಲ್ಲವೇ ?

ಗ್ರಾಮ ಪಂಚಾಯಿತಿಗಳ ಅವಧಿ ಈಗಾಗಲೇ ಮುಕ್ತಾಯಗೊಂಡಿದ್ದರೂ, ಸರ್ಕಾರ ಮತ್ತು ಚುನಾವಣಾ ಆಯೋಗದ ಮೊದಲ ಆದ್ಯತೆ ಬಾಕಿ ಉಳಿದಿರುವ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳನ್ನು ಮುಗಿಸುವುದಾಗಿದೆ.

 ಒಂದೇ ಸಮಯದಲ್ಲಿ ಮೂರೂ ಹಂತದ (ಜಿ.ಪಂ, ತಾ.ಪಂ, ಗ್ರಾ.ಪಂ) ಚುನಾವಣೆಗಳನ್ನು ನಡೆಸುವುದು ಆಡಳಿತಾತ್ಮಕವಾಗಿ ಹಾಗೂ ಹಣಕಾಸಿನ ದೃಷ್ಟಿಯಿಂದ ಸರ್ಕಾರಕ್ಕೆ ಸುಲಭವಲ್ಲ. ಆದ್ದರಿಂದ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳು ಮುಗಿದ ನಂತರವಷ್ಟೇ ಗ್ರಾ.ಪಂ. ಚುನಾವಣೆಗೆ ಅಧಿಕೃತ ಚಾಲನೆ ಸಿಗಬಹುದು.

ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ ಹಾಗೂ ಸಂವಿಧಾನ ಉಲ್ಲಂಘನೆ 

ಭಾರತೀಯ ಸಂವಿಧಾನದ ವಿಧಿ 243-E ಪ್ರಕಾರ ಸ್ಥಳೀಯ ಸಂಸ್ಥೆಗಳ ಅವಧಿ ಮುಗಿದ6 ತಿಂಗಳೊಳಗೆ ಚುನಾವಣೆ ನಡೆಸುವುದು ಕಡ್ಡಾಯ. ಆದರೆ, ವರ್ಷಗಟ್ಟಲೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆಡಳಿತ ನಡೆಸಿರುವುದು ಸಂವಿಧಾನದ ಆಶಯಕ್ಕೆ ಎಸಗಿದ ಅಪಚಾರವಾಗಿದೆ. ಚುನಾಯಿತ ಪ್ರತಿನಿಧಿಗಳಿಲ್ಲದೆ ಅಧಿಕಾರಿಗಳಷ್ಟೇ ಆಡಳಿತ ನಡೆಸುವುದರಿಂದ ಗ್ರಾಮ ಮಟ್ಟದ ನೈಜ ಸಮಸ್ಯೆಗಳು ಬಗೆಹರಿಯದೆ ವಿಕೇಂದ್ರೀಕರಣ ವ್ಯವಸ್ಥೆ ದುರ್ಬಲಗೊಂಡಿದೆ.

ಒಟ್ಟಾರೆ ಸರ್ಕಾರದಲ್ಲಿ  "ಹಣಕಾಸಿನ ಅಭಾವದಿಂದ ಅಭಿವೃದ್ಧಿ ಕಾಮಗಾರಿಗಳು ನಿಂತುಹೋಗಿವೆ, ಇಂತಹ ಸಮಯದಲ್ಲಿ ಚುನಾವಣೆ ಎದುರಿಸಿದರೆ ಜನಾಕ್ರೋಶ ಎದುರಿಸಬೇಕಾದೀತು" ಎಂಬ ರಾಜಕೀಯ ಭಯವೂ ಸರ್ಕಾರವನ್ನು ಹಿಂದೇಟು ಹಾಕುವಂತೆ ಮಾಡಿತ್ತು ಎಂಬುದು ವಿರೋಧಪಕ್ಷಗಳ ನುಡಿಯಾಗಿದೆ. ಆ ಪಕ್ಷಗಳೂ ಮೀಸಲಾತಿ ಗೊಂದಲ ತೋರಿಸಿ ಚುನಾವಣೆ ನಡೆಸದೆ ಕಾಲಾಹರಣ ಮಾಡಿರುವುದು ರಾಜಕೀಯ ವಿಪರ್ಯಾಸ.

ಸರ್ಕಾರ ಹಾಗೂ ಚುನಾವಣಾ ಆಯೋಗವು ಚುನಾವಣೆಗಳನ್ನು ಮುಂದೂಡುತ್ತಾ ಬಂದಿದ್ದಕ್ಕೆ
ಉಚ್ಚ ನ್ಯಾಯಾಲಯ ಹಲವು ಬಾರಿ ತರಾಟೆಗೆ ತೆಗೆದುಕೊಂಡಿದೆ. ಆಡಳಿತಾಧಿಕಾರಿಗಳ ನೇಮಕ ಕೇವಲ 'ಮಧ್ಯಂತರ ವ್ಯವಸ್ಥೆ'ಯಷ್ಟೇ ಹೊರತು ಅದನ್ನೇ ಶಾಶ್ವತ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಾಲಯದ ಈ ಕಟ್ಟುನಿಟ್ಟಿನ ಆದೇಶದ ಬಿಸಿಯೇ ಈಗ ಸರ್ಕಾರ ಮೀಸಲಾತಿ ಪ್ರಕಟಿಸಲು ಪ್ರಮುಖ ಕಾರಣ.

ಸರ್ಕಾರಕ್ಕೆ ರಾಜಕೀಯ ಮತ್ತು ಆರ್ಥಿಕ ಸವಾಲುಗಳಿದ್ದರೂ, ಹೈಕೋರ್ಟ್ ನಿರ್ದೇಶನ ಮತ್ತು ಸಂವಿಧಾನಾತ್ಮಕ ಕಟ್ಟುಪಾಡುಗಳಿಂದಾಗಿ ಇನ್ನು ಮುಂದೆ ಚುನಾವಣೆಗಳನ್ನು ಮುಂದೂಡುವುದು ಸರ್ಕಾರಕ್ಕೆ ಸಾಧ್ಯವಿಲ್ಲದಂತಾಗಿರುವುದರಿಂದ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ಹೆಚ್ಚಿದೆ.

ಹೊಸ ಆರ್.‌ ಟಿ. ಸಿ. 25ಲಕ್ಷ ನವೀಕೃತ ಪಹಣಿ ಹಂಚುವ ಗುರಿ ಇದರಲ್ಲಿ ಏನಿರುತ್ತೇ ? ಏನುಗಮನಿಸಬೇಕಾಗಿರುತ್ತೆ ?

model of new rtc

ರಾಜ್ಯದಲ್ಲಿ ಭೂ ವ್ಯಾಜ್ಯಗಳಿಗೆ ಕಡಿವಾಣ ಹಾಕಲು ಮತ್ತು ಕಂದಾಯ ವ್ಯವಸ್ಥೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಲು ಕರ್ನಾಟಕ ಕಂದಾಯ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ  ನವೀಕೃತ ಮಾದರಿಯ ಆರ್‌ಟಿಸಿ (ಫಾರ್ಮ್ 16-ಎ) ವಿತರಣೆಗೆ ಮುಂದಾಗಿದೆ. ರಾಜ್ಯ ಸರ್ಕಾರದ ಭೂಮಿ ಆನ್‌ಲೈನ್ ತಂತ್ರಾಂಶದ ಅಡಿಯಲ್ಲಿ ಈ ಹೊಸ ಮಾದರಿಯ ಪಹಣಿಗಳು ಸಾರ್ವಜನಿಕರಿಗೆ  ಕೆಲವೇ ದಿನದಲ್ಲಿ ಲಭ್ಯವಾಗಲಿದ್ದು, ನಕಲಿ ದಾಖಲೆಗಳ ಹಾವಳಿಗೆ ಸಂಪೂರ್ಣ ತಡೆ ಬೀಳಲಿದೆ.

ಹೊಸ ಆರ್‌ಟಿಸಿಯಲ್ಲಿ ಪ್ರಮುಖ ಬದಲಾವಣೆಗಳು :

14 ಅಂಕಿಯ 'ಯುಎಲ್‌ಪಿಐಎನ್' (ULPIN) ಪ್ರತಿಯೊಂದು ಜಮೀನಿನ ತುಂಡಿಗೂ ಆಧಾರ್ ಮಾದರಿಯಲ್ಲಿ 14 ಸಂಖ್ಯೆಗಳ 'ವಿಶಿಷ್ಟ ಭೂ ಗುರುತಿನ ಸಂಖ್ಯೆ' (Unique Land Parcel Identification Number) ಹಾಗೂ ಓಪನ್ ಲೊಕೇಶನ್ ಕೋಡ್  ನೀಡಲಾಗುತ್ತದೆ. ಆಧಾರ್ ಹಾಗೂ ರೈತ ಐಡಿ ಲಿಂಕ್: ಮಾಲೀಕರ ಗೌಪ್ಯತೆಯನ್ನು ಕಾಯ್ದುಕೊಂಡು ಆಧಾರ್ ಸಂಖ್ಯೆಯನ್ನು  ಹಾಗೂ ವಿಶಿಷ್ಟ 'ರೈತ ಐಡಿ'ಯನ್ನು ಆರ್‌ಟಿಸಿಯಲ್ಲಿ ಮುದ್ರಿಸಲಾಗುತ್ತದೆ.

ಆರ್‌ಟಿಸಿಯಲ್ಲೇ 'ಭೂ ನಕ್ಷೆ': ಜಮೀನಿನ ಭೌಗೋಳಿಕ ಗಡಿ ಗುರುತಿಸುವ ಜಿಯೋ-ರೆಫರೆನ್ಸ್ಡ್ ಸರ್ವೇ ಸ್ಕೆಚ್ ಅನ್ನು ಆರ್‌ಟಿಸಿ ಪ್ರತಿಯ ಮೇಲೆಯೇ ಅಳವಡಿಸಲಾಗಿರುತ್ತದೆ. ದಾಖಲೆಯ ನಕಲಿಕರಣ ತಡೆಯಲು ಪ್ರತಿಯೊಂದು ಆರ್‌ಟಿಸಿಗೂ ಪ್ರತ್ಯೇಕ ಸ್ಕ್ಯಾನ್ ಮಾಡಬಹುದಾದ ಡೈನಾಮಿಕ್ ಕ್ಯೂಆರ್ ಕೋಡ್ ಇರಲಿದೆ.

ಈ ಮಾದರಿಯ ಆರ್‌ ಟಿ ಸಿ ವಿತರಣೆಯಿಂದ ಏನೆಲ್ಲಾ ಲಾಭ ?

* ನಕ್ಷೆ, ಆಧಾರ್ ಹಾಗೂ ಕ್ಯೂಆರ್ ಕೋಡ್ ಜೋಡಣೆಯಿಂದಾಗಿ ನಕಲಿ ಆರ್‌ಟಿಸಿ ಸೃಷ್ಟಿಸಿ ಜಮೀನು ಹೂಡಿಕೆದಾರರನ್ನು ಅಥವಾ ರೈತರನ್ನು ವಂಚಿಸುವುದನ್ನು ತಡೆಯಬಹುದು.

* ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಜಮೀನಿನ ನೈಜ ಮಾಲೀಕರು ಯಾರು ಎಂಬುದನ್ನು ಕ್ಷಣಾರ್ಧದಲ್ಲಿ ಧೃಡೀಕರಿಸಿಕೊಳ್ಳಬಹುದು.

* ಜಮೀನಿನ ಮೇಲಿರುವ ಸಾಲದ ಹೊಣೆಗಾರಿಕೆ, ಎ/ಬಿ ಖರಾಬು ವಿವರಗಳು ಹಾಗೂ ನ್ಯಾಯಾಲಯದ ಮೊಕದ್ದಮೆಗಳ ಮಾಹಿತಿ ಸ್ಪಷ್ಟವಾಗಿ ಲಭ್ಯವಾಗುವುದರಿಂದ ಬ್ಯಾಂಕ್ ಸಾಲ ಪಡೆಯಲು ಮತ್ತು ಆಸ್ತಿ ನೋಂದಣಿಗೆ ಅನುಕೂಲವಾಗಲಿದೆ.

ಕಂದಾಯ ಇಲಾಖೆಯು ಈ ಪ್ರಕ್ರಿಯೆಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ರಾಜ್ಯಾದ್ಯಂತ ಹಂತ ಹಂತವಾಗಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುತ್ತಿದೆ. 'ಭೂಮಿ' ಪೋರ್ಟಲ್ ಮೂಲಕವೇ ಹೊಸ ಮಾದರಿಯ ಆರ್‌ಟಿಸಿಗಳನ್ನು ಮುಂದಿನ ಕೆಲವುದಿನಗಳಲ್ಲಿ ಅಥವಾ ಕೆಲವು ತಿಂಗಳುಗಳಲ್ಲಿ ಸಾರ್ವಜನಿಕರು ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದ ಪಹಣಿಯಲ್ಲಿ ಮಹತ್ವದ ಬದಲಾವಣೆಗೆ ಸಿದ್ಧತೆ :

ಕರ್ನಾಟಕದ ರೈತರ ಪಹಣಿ (RTC)ಯಲ್ಲಿ ಮಾಲೀಕರ ಫೋಟೋ, ವಿಳಾಸ, ಆಧಾರ್‌, FRUITS ID ಮತ್ತು QR ಕೋಡ್‌ ಸೇರಿದಂತೆ ಹಲವು ಮಾಹಿತಿಗಳನ್ನು ಸೇರ್ಪಡೆಗೊಳಿಸುವ ಉದ್ದೇಶವಿದೆ. ಪಹಣಿ ಹಾಗೂ ಭೂನಕ್ಷೆಯ ಮಾಹಿತಿಯನ್ನು ಹೊಂದಾಣಿಕೆ ಮಾಡುವುದರಿಂದ ದಾಖಲೆ ಪರಿಶೀಲನೆ ಸುಲಭವಾಗುವ ನಿರೀಕ್ಷೆಯಿದ್ದು, ಮುಂದಿನ 3–4 ತಿಂಗಳಲ್ಲಿ 25 ಲಕ್ಷ ನವೀಕೃತ ಪಹಣಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.

ಈ ಬದಲಾವಣೆಗಳಿಂದ ನಕಲಿ ದಾಖಲೆಗಳನ್ನು ಪತ್ತೆಹಚ್ಚಲು, ಭೂಮಿಯ ವಿಸ್ತೀರ್ಣದಲ್ಲಿನ ವ್ಯತ್ಯಾಸಗಳನ್ನು ಗುರುತಿಸಲು ಮತ್ತು ರೈತರ ಮಾಹಿತಿಯನ್ನು ಪರಿಶೀಲಿಸಲು ನೆರವಾಗಬಹುದು. ರೈತರು ತಮ್ಮ ಪಹಣಿಯಲ್ಲಿನ ಹೆಸರು, ಸರ್ವೆ ನಂಬರ್‌, ವಿಸ್ತೀರ್ಣ ಹಾಗೂ FRUITS ID ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಸೂಕ್ತ. ಈಗಿನ ಆರ್‌ ಟಿ ಸಿ ಮತ್ತು ಮುಂದಿನ ಆರ್‌ ಟಿಸಿ ಬಂದನಂತರದಲ್ಲಿ ಎರಡನ್ನೂ ಪರಿಶೀಲಿಸಿಕೊಳ್ಳಿ.


As an Amazon Associate I earn from qualifying purchases.

https://link.amazon/B02oO1hGc

ಭಾರತೀಯ ಷೇರು ಮಾರುಕಟ್ಟೆ ಓಟಕ್ಕೆ ಸಕಾಲ ಸೃಷ್ಟಿಯಾಗುತ್ತದೆಯೇ...

can indian stock market rally comes again

 ಭಾರತೀಯ ಷೇರು ಮಾರುಕಟ್ಟೆ ಓಟಕ್ಕೆ ಸಕಾಲ ಸೃಷ್ಟಿಯಾಗುತ್ತದೆಯೇ...  ಅದು ಇಂದೇ ಎಂದು ಹೇಳಲಾಗುವುದಿಲ್ಲ ಮತ್ತು ಎಂದು ಎಂದು ನಿರ್ಧರಿಸಲೂ ಆಗುವುದಿಲ್ಲ... ವಾತಾವರಣ ಪೂರಕವಾಗಿದೆಯೇ ಎಂಬ ವಿಶ್ಲೇಷಣೆ 

ಜಗತ್ತಿನ ಷೇರು ಮಾರುಕಟ್ಟೆಗಳಲ್ಲಿ ದೀರ್ಘಕಾಲದಿಂದ ಒಂದು ಪ್ರಬಲ ನಂಬಿಕೆ ಚಾಲ್ತಿಯಲ್ಲಿತ್ತು. ಅಮೆರಿಕದ ಮಾರುಕಟ್ಟೆ ಸುರಕ್ಷಿತ, ತಂತ್ರಜ್ಞಾನ ಕಂಪನಿಗಳು ಬೆಳವಣಿಗೆಯ ಎಂಜಿನ್, ಕೃತಕ ಬುದ್ಧಿಮತ್ತೆ (ಎಐ) ಭವಿಷ್ಯದ ದೊಡ್ಡ ಆದಾಯದ ಮೂಲ. ಆದರೆ ಈ ನಂಬಿಕೆಗಳ ಹಿಂದೆ ಅಡಗಿರುವ ಸಾಲದ ಹೊರೆ, ಬಡ್ಡಿ ಪಾವತಿಯ ಹೆಚ್ಚುತ್ತಿರುವ ವೆಚ್ಚ ಮತ್ತು ಎಐ ಕ್ಷೇತ್ರದಲ್ಲಿ ಹೂಡಿಕೆಗೆ ತಕ್ಕ ಲಾಭ ದೊರೆಯುತ್ತದೆಯೇ ಎಂಬ ಪ್ರಶ್ನೆಗಳು ಜಾಗತಿಕ ಹೂಡಿಕೆದಾರರನ್ನು ಹೊಸ ಲೆಕ್ಕಾಚಾರದತ್ತ ತಳ್ಳುತ್ತಿದೆ.

ಅಮೆರಿಕ, ಚೀನಾ ಮತ್ತು ತೈವಾನ್‌ನ ತಂತ್ರಜ್ಞಾನ ಷೇರುಗಳಲ್ಲಿ ಎಐ ಕಂಪನಿಗಳ ನಿರೀಕ್ಷಿತ ಮಟ್ಟದ ಲಾಭಗಳಿಸದಿದ್ದಲ್ಲಿ ನಿರಾಸೆ, ಕಾರ್ಪೋರೇಟ್‌ ಸಭೆಯಲ್ಲಿ ಎಐ ನಿಂದ ಕಂಪನಿಯ ಕಾರ್ಯದಲ್ಲಿ ವಿಶೇಷ ಪ್ರಗತಿ ಸಾಧ್ಯವಾಗುತ್ತಿಲ್ಲ ಎಂಬ ವಾದ ಹಾಗೂ ಎಐ ಕಂಪನಿಗಳ ಸಾಲದ ಹೊರೆ, ಇನ್ನು ಕೆಲವೇ ತಿಂಗಳಲ್ಲಿ ಸಾಲದ ಕಂತಿನ ಮರುಪಾವತಿಗೆ ನೀಡಿದ್ದ ವಿನಾಯಿತಿ ಅವಧಿ ಮುಗಿದು ಮುಂಬರುವ ದಿನಗಳಲ್ಲಿ ಎಐ ಕಂಪನಿಗಳ ಸಾಲದ ಕಂತಿನ ಪ್ರಾರಂಭಿಕ ಅವಧಿ ಆರಂಭಗೊಳ್ಳಲಿದೆ. ಈ ಹಂತದಲ್ಲಿ ಕಂಪನಿ ಮರುಪಾವತಿಯಲ್ಲಿ ಎಡವಿದರೆ, ಲಾಭಾಂಶ ಕುಸಿತ ಉಂಟಾದರೆ, ಅದರಿಂದ ಭಾರತಕ್ಕೆ ಬಂಡವಾಳ ಹರಿದುಬರುವ ಹೊಸ ಅವಕಾಶ ಸೃಷ್ಟಿಯಾಗಬಹುದೇ ಎಂಬ ಚರ್ಚೆ ವಿತ್ತವಲಯದಲ್ಲಿ ನಡೆಯಲು ಆರಂಭಗೊಂಡಿದೆ. ಆದರೆ  ಜಾಗತಿಕ ಬಂಡವಾಳದ ಹರಿವನ್ನು ನಿರ್ಧರಿಸುವ ಸಾಲ, ಬಡ್ಡಿದರ, ಕಂಪನಿಗಳ ಲಾಭ, ಷೇರುಗಳ ಮೌಲ್ಯಮಾಪನ ಮತ್ತು ಭೌಗೋಳಿಕ ರಾಜಕೀಯದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಬೇಕಾದ  ಸತ್ಯವೂ ಅಡಗಿದೆ. ಕೇವಲ ನಂಬಿಕೆ ಮಾತ್ರವೇ ಪುಷ್ಟೀಕರಣಕ್ಕೊಳಪಡುವುದಿಲ್ಲ.

 ಅಮೆರಿಕದ ಆರ್ಥಿಕತೆ ನಿಧಾನಗೊಂಡು ಬಡ್ಡಿದರ ಕಡಿತದ ನಿರೀಕ್ಷೆ ಬಲಗೊಂಡರೆ, ಬಾಂಡ್ ಇಳುವರಿ ಇಳಿಯಬಹುದು. ಆಗ ಭಾರತದಂತಹ ದೇಶಗಳ ಷೇರು ಮಾರುಕಟ್ಟೆಗಳು ವಿದೇಶಿ ಹೂಡಿಕೆದಾರರಿಗೆ ಹೆಚ್ಚು ಆಕರ್ಷಕವಾಗುವ ಸಾಧ್ಯತೆ ಇದೆ ಎಂಬ ಚರ್ಚೆಯನ್ನೂ ವಿತ್ತವಲಯ ವಿಶ್ಲೇಷಿಸುತ್ತಿದೆ.

ಅಧಿಕೃತ ಅಂಕಿ ಅಂಶಗಳು ಲೆಕ್ಕದಲ್ಲಿಲ್ಲದಿದ್ದರೂ ಅಮೇರಿಕಾದ ಬಡ್ಡಿ ಪಾವತಿ ರಕ್ಷಣಾ ವೆಚ್ಚವನ್ನು ಮೀರಿಸಬಹುದಾದ ದಿನಗಳು ಬರಲಿವೆಯೇ ಎಂಬ ಅನುಮಾನವೂ ಚರ್ಚೆಯಲ್ಲಿದೆ. ಇದಕ್ಕೆ ಪೂರಕವಾಗಿ ಅಮೆರಿಕದ ಬಜೆಟ್‌ನಲ್ಲಿ ಸಾಲದ ಮೇಲಿನ ಬಡ್ಡಿ ಪಾವತಿಯ ಹೊರೆ ಹೆಚ್ಚುತ್ತಿರುವುದು ಗಂಭೀರ ಆರ್ಥಿಕ ಚರ್ಚೆಯ ವಿಷಯವಾಗಿದೆ. ಇದರ ಪರಿಣಾಮ ಕೇವಲ ಸರ್ಕಾರಿ ಲೆಕ್ಕಪತ್ರಕ್ಕೆ ಸೀಮಿತವಾಗುವುದಿಲ್ಲ. ಸಾಲದ ಮೇಲಿನ ಬಡ್ಡಿಗೆ ಹೆಚ್ಚಿನ ಹಣ ಮೀಸಲಿಡಬೇಕಾದರೆ, ಮೂಲಸೌಕರ್ಯ, ಸಂಶೋಧನೆ, ಸಾಮಾಜಿಕ ಕಾರ್ಯಕ್ರಮಗಳು ಮತ್ತು ಇತರ ಆದ್ಯತೆಗಳಿಗೆ ಲಭ್ಯವಾಗುವ ಹಣದ ಮೇಲೆ ಒತ್ತಡ ಹೆಚ್ಚಬಹುದು. ಸಾಲದ ಮರುಹಣಕಾಸು ವೆಚ್ಚವೂ ಏರಿದರೆ, ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಬಹುದು.

ಎಐ ಕ್ಷೇತ್ರದ ಬಂಡವಾಳ ಹೂಡಿಕೆ: ಲಾಭಕ್ಕಿಂತ ಸಾಲವೇ ಹೆಚ್ಚಾಗುತ್ತಿದೆಯೇ?

ಕೃತಕ ಬುದ್ಧಿಮತ್ತೆ ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಆದರೆ ಎಐ ಅಭಿವೃದ್ಧಿಗೆ ಅಗತ್ಯವಿರುವ ದತ್ತಾಂಶ ಕೇಂದ್ರಗಳು, ದುಬಾರಿ ಚಿಪ್‌ಗಳು, ವಿದ್ಯುತ್, ತಂಪುಗೊಳಿಸುವ ವ್ಯವಸ್ಥೆಗಳು ಮತ್ತು ಗಣಕ ಸಾಮರ್ಥ್ಯಕ್ಕೆ ಭಾರಿ ಬಂಡವಾಳ ಬೇಕಾಗಿದೆ. ಪ್ರಮುಖ ತಂತ್ರಜ್ಞಾನ ಕಂಪನಿಗಳು ಎಐ ಮೂಲಸೌಕರ್ಯಕ್ಕಾಗಿ ನೂರಾರು ಶತಕೋಟಿ ಡಾಲರ್‌ಗಳ ಹೂಡಿಕೆ ಯೋಜನೆಗಳನ್ನು ರೂಪಿಸುತ್ತಿವೆ. ಈ ಹೂಡಿಕೆಯಿಂದ ನಿರೀಕ್ಷಿತ ಆದಾಯ ಸಿಗದಿದ್ದರೆ, ಹೂಡಿಕೆದಾರರ ವಿಶ್ವಾಸ ಕುಸಿಯಬಹುದು. ಆಂಗ್ಲ ಭಾಷೆಯ ಪ್ರಮುಖ ಪತ್ರಿಕೆಯ ಉಲ್ಲೇಖದಂತೆ ವಿಶ್ಲೇಷಿಸುವುದಾದರೆ ಎಐ ಮೂಲಸೌಕರ್ಯದಲ್ಲಿ ಅತಿಯಾದ ಹೂಡಿಕೆ ಮತ್ತು ಭವಿಷ್ಯದ ಆದಾಯದ ಅಂದಾಜುಗಳ ನಡುವಿನ ಅಂತರದ ಬಗ್ಗೆ ಆರ್‌ ಬಿ ಐ ಮತ್ತು ಐ ಎಮ್‌ ಎಫ್‌ ಎಚ್ಚರಿಸಿದೆ. ಅದೇ ದಿನದ ಮಾರುಕಟ್ಟೆ ವರದಿಗಳಲ್ಲಿಯೂ ಎಐಗೆ ಸಂಬಂಧಿಸಿದ ಸಾಲದ ಹೊರೆ ಮತ್ತು ಹಣಕಾಸು ಸಂಗ್ರಹದ ಅಪಾಯಗಳ ಬಗ್ಗೆ ಚರ್ಚೆಯಾಗಿದೆ.

ಆದರೆ ಇಲ್ಲೂ ಎರಡು ವಿಭಿನ್ನ ವಾಸ್ತವಗಳಿವೆ.  ಎಐ ತಂತ್ರಜ್ಞಾನಕ್ಕೆ ಬೇಡಿಕೆ ಇದೆ. ಕಂಪನಿಗಳು ಎಐ ಸೇವೆಗಳಿಂದ ನೈಜ ಆದಾಯ ಗಳಿಸುತ್ತಿವೆ; ಚಿಪ್‌ಗಳ ಬೇಡಿಕೆಯೂ ಪ್ರಬಲವಾಗಿದೆ.  ಇತ್ತೀಚೆಗೆ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ತೈವಾನ್‌ನ ಪ್ರಮುಖ ಚಿಪ್ ತಯಾರಕ TSMC 2026ರ ಮೂರನೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 69ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಎಐ ಕ್ಷೇತ್ರದ ಎಲ್ಲ ಕಂಪನಿಗಳೂ ಸಂಕಷ್ಟದಲ್ಲಿವೆ ಎಂಬ ವಾದಕ್ಕೆ ವಿರುದ್ಧವಾದ ಉದಾಹರಣೆಯಾಗಿ ನಿಲ್ಲುತ್ತದೆ.  ಹೂಡಿಕೆದಾರರು ಸಮೂಹಸನ್ನಿಗೊಳಗಾಗಿ ಮಾರಾಟ ಅಥವಾ ಖರೀದಿಗೆ ಮುಂದಾದರೆ ಸಂಕಷ್ಟ ಖಚಿತವಾಗಿರುತ್ತದೆ.

ತೈವಾನ್, ಅಮೆರಿಕ ಮತ್ತು ಚೀನಾದ ಷೇರುಗಳು ಕುಸಿದರೆ ಭಾರತದ ಅವಕಾಶ ಎಷ್ಟು?

ತಂತ್ರಜ್ಞಾನ ಸರಪಳಿಯಲ್ಲಿ ಈ ಮೂರು ಆರ್ಥಿಕತೆಗಳು ಪ್ರಮುಖ ಸ್ಥಾನ ಹೊಂದಿವೆ. ಆದರೆ ಅವುಗಳ ಅಪಾಯದ ಸ್ವರೂಪ ಒಂದೇ ಅಲ್ಲ. ಆದರೂ ಎಐ ಕ್ಷೇತ್ರದಲ್ಲಿ ನಿರೀಕ್ಷೆಯ ಲಾಭಕ್ಕೆ ವಿರುದ್ಧವಾದರೆ ಹೂಡಿಕೆಗೆ ಬೇರೆ ಸಮರ್ಥ ಕ್ಷೇತ್ರದ ಆಯ್ಕೆ ಹುಡುಕಬಹುದು. ಆಗ  ಉದಯೋನ್ಮುಖವಾಗುತ್ತಿರುವ ಸುಭದ್ರ ಮಾರುಕಟ್ಟೆ ಎಂದು ಭಾರತವನ್ನು ಗುರುತಿಸುವ ಸನ್ನಿವೇಶ ಇದೆ ಎಂಬ ವಾದ ವಿತ್ತವಲಯದಲ್ಲಿದೆ. ಇದಕ್ಕೆ ಪೂರಕವೆಂಬಂತೆ  ಅಕ್ಟೋಬರ್ 15ರಂದು ಪ್ರಕಟವಾದ ಮಾರುಕಟ್ಟೆ ವರದಿಯು ಮತ್ತೊಂದು ಸಾಧ್ಯತೆಯನ್ನು ತೋರಿಸಿದೆ. ಇತರ ಏಷ್ಯನ್ ಮಾರುಕಟ್ಟೆಗಳು ಒತ್ತಡಕ್ಕೆ ಒಳಗಾಗಿದ್ದ ಸಂದರ್ಭದಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಸುಮಾರು 1,500 ಅಂಕಗಳ ಏರಿಕೆ ಕಂಡಿತ್ತು. ಭಾರತದ ಮೌಲ್ಯಮಾಪನದ ಆಕರ್ಷಣೆ ಹೂಡಿಕೆದಾರರ ಗಮನ ಸೆಳೆದಿರುವುದು ಇದಕ್ಕೆ ಒಂದು ಕಾರಣವೆಂದು ವರದಿ ತಿಳಿಸಿದೆ.

ಭಾರತದ ಮಾರುಕಟ್ಟೆಗೆ ಹಣ ಹೂಡಲು ಹೂಡಿಕೆದಾರರು ದಾಪುಗಾಲಿಕ್ಕಲು ಅಮೇರಿಕಾದ ಬಾಂಡ್ ಇಳುವರಿ ಇಳಿಯಬೇಕು, ಡಾಲರ್‌ನ ಬಲ ಕಡಿಮೆಯಾಗಬೇಕು ಡಾಲರ್ ದುರ್ಬಲವಾದರೆ ಭಾರತದ ಮಾರುಕಟ್ಟೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆಂಬ ನಂಬಿಕೆ ಇದೆ.

ಭಾರತದ ನಿಜವಾದ ಶಕ್ತಿ ಅದರ ಜನಸಂಖ್ಯೆ, ದೇಶೀಯ ಬಳಕೆ, ಕೈಗಾರಿಕಾ ವಿಸ್ತರಣೆ, ಡಿಜಿಟಲ್ ಸೇವೆಗಳು ಮತ್ತು ದೀರ್ಘಕಾಲೀನ ಆರ್ಥಿಕ ಬೆಳವಣಿಗೆಯ ಸಾಮರ್ಥ್ಯದಲ್ಲಿದೆ. ಈ ಸಾಮರ್ಥ್ಯವು ಕಂಪನಿಗಳ ಲಾಭದಲ್ಲಿ ಪ್ರತಿಫಲಿಸಿದಾಗ ಮತ್ತು ಮಾರುಕಟ್ಟೆಯ ಮೌಲ್ಯಮಾಪನ ಸಮಂಜಸವಾಗಿದ್ದಾಗ ವಿದೇಶಿ ಹೂಡಿಕೆದಾರರ ವಿಶ್ವಾಸ ಬಲಗೊಳ್ಳುತ್ತದೆ.

ಹೀಗಾಗಿ, ಭಾರತಕ್ಕೆ ಎಫ್‌ಐಐಗಳ ಹೊಸ ಅಲೆಯ ಅವಕಾಶ ಇದೆ; ಆದರೆ ಅದು ಖಚಿತವಾಗಿ ಆರಂಭವಾಗಲಿದೆ ಎಂದು ಹೇಳಲು ಇನ್ನೂ ಸಾಕಷ್ಟು  ಕಾಯಬೇಕು. 

ಇಲ್ಲಿ ಪ್ರಕಟಣೆಗೊಂಡಿರುವುದು ಹಲವು ತಜ್ಞರ ಸಂಧರ್ಭೋಚಿತ ನಿಲುವುಗಳನ್ನು ಕ್ರೋಢೀಕರಿಸಿದ್ದಾಗಿದೆ. ಆದರೆ ಇದು ಮಾರುಕಟ್ಟೆ ಏರುತ್ತದೆ ಎಂದು ಹೂಡಿಕೆದಾರರಿಗೆ ನೀಡುತ್ತಿರುವ ಉತ್ತೇಜನ ಅಲ್ಲ. ಯಾವುದೇ ಕಾಲದಲ್ಲೂ ಮಾರುಕಟ್ಟೆ ಸುಧೀರ್ಘವಾಗಿ ಏರಿಕೆ ಅಥವಾ ಇಳಿಕೆಯ ಒಂದೇ ದಿಕ್ಕಿನಲ್ಲಿ ಮುಖ ಮಾಡಿದ್ದಿಲ್ಲ. ಹೂಡಿಕೆದಾರರರು ಹೂಡಿಕೆಗೆ ಮುನ್ನ ವಿಶ್ಲೇಷಿಸುವುದು ಅಥವಾ ನೋಂದಾಯಿತ ಹೂಡಿಗೆಯ ಸಲಹೆಗಾರರಿಂದ ಸಲಹೆ ಪಡೆದು  ಹೂಡಿಕೆ ಮಾಡುವುದು ಒಳಿತು.


ತೀರ್ಥಹಳ್ಳಿಯಲ್ಲಿ ಅಕ್ಟೋಬರ್ 24ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಬೃಹತ್ ಸಮಾವೇಶ

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ, ತೀರ್ಥಹಳ್ಳಿ ಇವರ ಆಶ್ರಯದಲ್ಲಿ ಹಾಗೂ ಆರ್ಯ ಈಡಿಗರ ಸಂಘ, ಬಿಲ್ಲವ ಸಂಘ, ನಾರಾಯಣ ಗುರು ವಿಚಾರ ವೇದಿಕೆ, ಈಡಿಗ-ಬಿಲ್ಲವ ಮಹಿಳಾ ಸಂಘ ಮತ್ತು ಸಮಾಜದ ಸಹಕಾರ ಸಂಘಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಹಾಗೂ ಸಮಾಜ ಬಾಂಧವರ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮವು ಅಕ್ಟೋಬರ್ 24, 2026 ಶನಿವಾರದಂದು ತೀರ್ಥಹಳ್ಳಿಯ ಸುವರ್ಣ ಸಂಸ್ಕೃತಿ ಭವನದ ಆವರಣದಲ್ಲಿ ಜರುಗಲಿದೆ. ಅಂದು  ಬೆಳಿಗ್ಗೆ 9:00 ಗಂಟೆಗೆ ತೀರ್ಥಹಳ್ಳಿಯ ಕುಶಾವತಿ ಪಾರ್ಕ್‌ನಿಂದ ಭವ್ಯ ಮೆರವಣಿಗೆ ಆರಂಭವಾಗಲಿದ್ದು ಸಂಸ್ಕೃತಿ ಮಂದಿರದ ಆವರಣದಲ್ಲಿ ಬೆಳಿಗ್ಗೆ 11:00 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ

ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶ್ರೀ ರೇಣುಕಾನಂದ ಸ್ವಾಮೀಜಿಯವರು (ಅಧ್ಯಕ್ಷರು: ಶ್ರೀ ನಾರಾಯಣಗುರು ಮಹಾಸಂಸ್ಥಾನ, ಶ್ರೀ ಕ್ಷೇತ್ರ ಗರಡ, ನಿಟ್ಟೂರು, ಸಾಗರ), ಶ್ರೀ ಶ್ರೀ ಶ್ರೀ ಯೋಗೇಂದ್ರ ಅವಧೂತರು (ಶ್ರೀ ಕಾಳಿಕಾಂಬಾ ಪೀಠ, ಶ್ರೀ ಕ್ಷೇತ್ರ ಸಾಗರಗದ್ದೆ) ಹಾಗೂ ಶ್ರೀ ಎಸ್. ರಾಮಪ್ಪನವರು (ಧರ್ಮದರ್ಶಿಗಳು, ಶ್ರೀ ಗಂಧದ ಕೋಠೇಶ್ವರ ದೇವಸ್ಥಾನ, ಸಿಗಂಧೂರು ) ಇವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಲಿದ್ದು ಸಭಾಧ್ಯಕ್ಷತೆಯನ್ನು  , ಶ್ರೀ ನಾರಾಯಣ ಗುರು ಜಯಂತಿ ಆಚರಣಾ ಸಮಿತಿ ಯ ಅಧ್ಯಕ್ಷ  ಶ್ರೀ ಅಶೋಕ ಮೂರ್ತಿ  ವಹಿಸಲಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ  ಶ್ರೀ ಎಸ್. ಮಧು ಬಂಗಾರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಕೆ.ಪಿ.ಸಿ.ಸಿ ಅಧ್ಯಕ್ಷ  ಶ್ರೀ ಬಿ.ಕೆ. ಹರಿಪ್ರಸಾದ್‌, ಸಂಸದ  ಶ್ರೀ ಕೋಟ ಶ್ರೀನಿವಾಸ ಪೂಜಾರಿ ಕಾರ್ಕಳ ಕ್ಷೇತ್ರದ ಶಾಸಕ  ಶ್ರೀ ಸುನಿಲ್ ಕುಮಾರ್ , ಸಾಗರ ಶಾಸಕ  ಶ್ರೀ ಬೆಳೂರು ಗೋಪಾಲಕೃಷ್ಣ  ಪಾಲ್ಗೊಳ್ಳಲಿದ್ದಾರೆ.

ಈ ಸಮಾರಂಭದಲ್ಲಿ ಮಾಜಿ ಸಚಿವ ಶ್ರೀ ಕಾಗೋಡು ತಿಮ್ಮಪ್ಪನವರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.

ಸಮಾವೇಶದಲ್ಲಿ ಈ ಕೆಳಗಿನ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಧರಿಸಲಾಗಿದೆ:

1. ಶೈಕ್ಷಣಿಕ ಸಂಸ್ಥೆ ಪ್ರಾರಂಭ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡುವುದು.

2. ಎಲ್ಲಾ ರಾಜಕೀಯ ಪಕ್ಷಗಳಲ್ಲಿಯೂ ಸಮಾಜದ ಅರ್ಹರಿಗೆ ಅಧಿಕಾರದ ಸ್ಥಾನಮಾನಗಳಲ್ಲಿ ಆದ್ಯತೆ ನೀಡುವುದು.

3. ಶೇಕಡಾ 99% ರಷ್ಟು ಈಡಿಗ ಸಮುದಾಯದವರಿರುವ ಕರಾವಳಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರ ಮಾಡುವುದು.

4. ಈಡಿಗ ಸಮಾಜದ ಕುಲಕಸುಬನ್ನು ಕಸಿದುಕೊಂಡ ಸರ್ಕಾರಗಳು ಮಧ್ಯ ಮಾರಾಟ ಪರವಾನಗಿಯಲ್ಲಿ ಶೇ.50% ರಷ್ಟು ಮೀಸಲಾತಿ ನೀಡಬೇಕು.

5. ಜಾತಿ ಗಣತಿ ಸಮೀಕ್ಷೆಯನ್ನು ಸರ್ಕಾರಕ್ಕೆ ಸಲ್ಲಿಸಿದ ಕಾಂತರಾಜ್ ಮತ್ತು ಜಯಪ್ರಕಾಶ್ ಹೆಗ್ಡೆ ವರದಿಯನ್ನು ತಕ್ಷಣ ಬಿಡುಗಡೆ ಮಾಡಬೇಕು.

6. ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಕನಿಷ್ಠ ರೂ. 500 ಕೋಟಿ ಮೀಸಲಿಡಬೇಕು ಎಂಬ ಹಕ್ಕೊತ್ತಾಯವನ್ನು ಸಭೆ ಮಂಡಿಸಲಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಘಟಕರು ಕೋರಿದ್ದಾರೆ.


As an Amazon Associate I earn from qualifying purchases.

https://link.amazon/B02oO1hGc


ಬೆಳಗಿನ ಝಾವ ಮತ್ತು ರಾತ್ರಿ ವೇಳೆಯಲ್ಲಿ ಶಿವಮೊಗ್ಗ-ತೀರ್ಥಹಳ್ಳಿ ಖಾಸಗಿ ಬಸ್‌ಗಳ ದೌರ್ಜನ್ಯ: ಕಾನೂನು ಉಲ್ಲಂಘನೆ ವಿರುದ್ಧ ಬೃಹತ್ ಪ್ರತಿಭಟನೆಗೆ ಜಯಕರ್ನಾಟಕ ಸಂಘಟನೆಗಳ ಎಚ್ಚರಿಕೆ



ತೀರ್ಥಹಳ್ಳಿ: :  ಶಿವಮೊಗ್ಗ ಹಾಗೂ ತೀರ್ಥಹಳ್ಳಿ ನಡುವೆ ಸಂಚರಿಸುವ ಖಾಸಗಿ ಬಸ್‌ಗಳ ಸಿಬ್ಬಂದಿ ಪ್ರಯಾಣಿಕರ ಮೇಲಿನ ಶೋಷಣೆ ಹಾಗೂ ಮನಸೋಇಚ್ಛೆ ವರ್ತನೆ ಮಿತಿಮೀರಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರ್ಮಿಟ್ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವುದು ಹಾಗೂ ಗ್ರಾಮೀಣ ಭಾಗಗಳಿಗೆ ಸಾರಿಗೆ ಸಂಪರ್ಕ ಕಡಿತಗೊಳಿಸುತ್ತಿರುವ ಖಾಸಗಿ ಬಸ್‌ಗಳ ವಿರುದ್ಧ ತಾಲೂಕು ಜಯ ಕರ್ನಾಟಕ ಸಂಘಟನೆ ಅಕ್ಟೋಬರ್ 19ರಂದು ಬೃಹತ್ ಬಸ್ ತಡೆ ಹಾಗೂ ಪ್ರತಿಭಟನೆಗೆ ಕರೆ ನೀಡಿದೆ.

ಶಿವಮೊಗ್ಗ ಬಸ್ ನಿಲ್ದಾಣದಿಂದ ರಾತ್ರಿ10 ಗಂಟೆಯ ನಂತರ ತೀರ್ಥಹಳ್ಳಿಗೆ ಪ್ರಯಾಣಿಸುವ ಪ್ರಯಾಣಿಕರನ್ನು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ನಿಂದಿಸುವುದು,  ನಿಯಮದಂತೆ ತೀರ್ಥಹಳ್ಳಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕಾಗಿದ್ದರೂ ಅವರನ್ನು ನಿರ್ಲಕ್ಷಿಸಿ ಬಸ್‌ ನಿಲ್ದಾಣವೂ ತಮ್ಮ ಖಾಸಗಿ ಆಸ್ತಿ ಎಂಬಂತೆ ವರ್ತಿಸುತ್ತಾ ಅಲ್ಲಿರಬೇಡಿ, ಇಲ್ಲಿರಬೇಡಿ ಎಂದು ಜನರನ್ನು ನಿಂದಿಸುತ್ತಾ ಪ್ರಯಾಣಿಕರನ್ನು ಹೈರಾಣಿಗಿಸುತ್ತಿದ್ದಾರೆ.  ಮಹಿಳೆಯರು, ರೈತರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ದಿನಗೂಲಿ ಕಾರ್ಮಿಕರು ಸಾರಿಗೆ ಸೌಕರ್ಯವಿದ್ದರೂ ಇರುವ ಸೌಕರ್ಯ ಕೈಗೆಟುಕದಾಗಿ ಇದ್ದೂ ಇಲ್ಲದಂತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿಂದೆ  ಸಹಕಾರ ಸಾರಿಗೆ ವ್ಯವಸ್ಥೆಯು ರಾಮಕೃಷ್ಣಪುರ, ತೀರ್ಥಮುತ್ತೂರು, ಶುಂಠಿಕಟ್ಟೆ, ಹೊದಲ, ಉಬ್ಬೂರು, ಯಡೆಹಳ್ಳಿ, ಅಲಸೆ, ನಾಲೂರು, ಬಿದರಗೋಡು, ಮಲ್ಲಂದೂರು, ಶೇಡ್ಗಾರು, ಹೇರಂಬಾಪುರ, ಗಡಿಕಲ್ಲು , ಮುನ್ನೂರು ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸೇವೆ ನೀಡುತ್ತಿತ್ತು. ಆದರೆ ಪ್ರಸ್ತುತ ಖಾಸಗಿ ಬಸ್‌ಗಳು ಲಾಭದಾಯಕ ಮಾರ್ಗಗಳತ್ತ ಮಾತ್ರ ಗಮನಹರಿಸಿ, ಗ್ರಾಮೀಣ ಭಾಗದ ಮಾರ್ಗಗಳಲ್ಲಿ ಬಸ್ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ನಿತ್ಯ ಕಾನೂನು ಮತ್ತು ಪರ್ಮಿಟ್ ನಿಯಮಗಳ ಬಹಿರಂಗ ಉಲ್ಲಂಘನೆ :

ಮೋಟಾರು ವಾಹನ ಕಾಯ್ದೆ  1988ರ ನಿಬಂಧನೆಗಳ ಸ್ಪಷ್ಟ ಉಲ್ಲಂಘನೆ ಮಾಡುತ್ತಿದೆ. ಪರ್ಮಿಟ್ ಷರತ್ತು ಉಲ್ಲಂಘನೆ ( 66 ಮತ್ತು 84ರ ನಿಯಮದಂತೆ ) ಪರ್ಮಿಟ್ ಪಡೆದ ನಿಯಮಿತ ಮಾರ್ಗ ಮತ್ತು ವೇಳಾಪಟ್ಟಿಯನ್ನು ಪಾಲಿಸದೆ ಸ್ವಇಚ್ಛೆಯಿಂದ ಸಂಚಾರ ರದ್ದುಗೊಳಿಸುವುದು ಹಾಗೂ ನಿಗದಿತ ಸ್ಟಾಪ್‌ಗಳಲ್ಲಿ ಬಸ್ ನಿಲ್ಲಿಸದಿರುವುದು, ಪ್ರಯಾಣಿಕರನ್ನು ಹತ್ತಿಸಿಕೊಳ್ಳದಿರುವುದು ಗುರುತರ ಅಪರಾಧ ಆಗಿದೆ.

ಪ್ರಯಾಣಿಕರಿಗೆ ಸೇವೆ ನಿರಾಕರಣೆ (ನಿಯಮ 178 ಉಲ್ಲಂಘನೆ): ಟಿಕೆಟ್ ಪಡೆದ ಪ್ರಯಾಣಿಕರನ್ನು ಗಮ್ಯಸ್ಥಾನ ತಲುಪಿಸುವ ಮೊದೆಯೇ ಅರ್ಧದಲ್ಲೇ ಇಳಿಸುವುದು ಕಾನೂನುಬಾಹಿರ. ಆ ಬಸ್‌ ನಿಲ್ದಾಣದಲ್ಲಿ ನಿಲ್ಲಿಸುವುದಿಲ್ಲ. ತೂದೂರಿನಲ್ಲಿ ಇಳಿಯ ಬೇಕಾದರೆ ತೀರ್ಥಹಳ್ಳಿ ಟಿಕೇಟ್‌ ಪಡೆಯಿರಿ ಎಂಬೆಲ್ಲಾ ಸಬೂಬು ಹೇಳುವುದು ನಡೆಯುತ್ತಿದೆ.

ಸಾರ್ವಜನಿಕ ಸ್ಥಳದಲ್ಲಿ ಪ್ರಯಾಣಿಕರ ಮೇಲೆ ದೌರ್ಜನ್ಯ ಹಾಗೂ ನಿಂದನೆ:  ಪ್ರಯಾಣಿಕರ ಮೇಲೆ ದುರಾಡಳಿತ ತೋರುವುದು, ನಿಂದಿಸುವುದು ಮತ್ತು ಬೆದರಿಕೆ ಹಾಕುವುದು ಸಾರ್ವಜನಿಕ ಶಾಂತಿಗೆ ಭಂಗ ತರುವ ಕೃತ್ಯವಾಗಿದೆ.

ಹಲವು ವರ್ಷದ ಬೇಡಿಕೆ ಇದ್ದರೂ ಕಣ್ಣಿಗೆ ಕಾಣದಂತಿರುವ ಆರ್.ಟಿ.ಓ. ಅಧಿಕಾರಿಗಳು ಈ ಸಮಸ್ಯೆಗೆ ತಕ್ಷಣವೇ ಶಾಶ್ವತ ಪರಿಹಾರ ನೀಡಬೇಕಿದೆ.

ಶಿವಮೊಗ್ಗ ಮತ್ತು ತೀರ್ಥಹಳ್ಳಿ ಬಸ್ ನಿಲ್ದಾಣಗಳಲ್ಲಿ ರಾತ್ರಿ ವೇಳೆ ಆರ್‌ಟಿಒ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಪ್ರಯಾಣಿಕರಿಗೆ ಕಿರುಕುಳ ನೀಡುವ ಹಾಗೂ ನಿಯಮ ಉಲ್ಲಂಘಿಸುವ ಬಸ್‌ಗಳ ಪರ್ಮಿಟ್‌ಗಳನ್ನು ತಕ್ಷಣವೇ ರದ್ದುಗೊಳಿಸುವ ಇರುವ ಅಧಿಕಾರವನ್ನು ಬಳಸಿಕೊಳ್ಳಬೇಕು ಗ್ರಾಮೀಣ ಸಾರಿಗೆಗೆ ಆದ್ಯತೆ ನೀಡಬೇಕು.

ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ರಾತ್ರಿ ವೇಳೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಮತ್ತು ಸಿಬ್ಬಂದಿಗಳ ವಿರುದ್ಧ ಬರುವ ದೂರುಗಳ ಮೇಲೆ ತಕ್ಷಣವೇ FIR ದಾಖಲಿಸಬೇಕು.

ಪ್ರಯಾಣಿಕರು ನೇರವಾಗಿ ಆರ್‌ಟಿಒ ಅಥವಾ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಬಸ್ ನೋಂದಣಿ ಸಂಖ್ಯೆಯೊಂದಿಗೆ ದೂರು ನೀಡಲು ಜಾಗೃತಿ ಮೂಡಿಸಬೇಕು.

ಸಾರಿಗೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ಸಮಸ್ಯೆಗೆ ಸ್ಪಂದಿಸದಿದ್ದಲ್ಲಿ, ಅಕ್ಟೋಬರ್ 19ರಂದು ತಾಲೂಕು ಜಯ ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಮಟ್ಟದ ಹೋರಾಟ ಹಾಗೂ ಬಸ್ ತಡೆ ನಡೆಸಲಾಗುವುದು ಎಂದು ಕುರುವಳ್ಳಿ ನಾಗರಾಜ್ ಎಚ್ಚರಿಸಿದ್ದಾರೆ. ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.